Friday, 10 February 2012

ಹೋಗಿ ಬಾ ಮನವೇ.., ನಾ ಹಾರೈಸುವೆನು...


ಹೋಗಿ ಬಾ ಮನವೇ.., ನಾ ಹಾರೈಸುವೆನು...ಬಾಳೆಂಬ ಪಯಣದಲಿ ಅರಿಯದೆ
ಜೊತೆಯಾದೆ...
ದಾರಿ ಕವಲಾಯಿತು...
ಮನಸು ಎರಡಾಯಿತು..!!

ಕಾಣದ ದೇವರ ಬಳಿ ಪ್ರತಿಕ್ಷಣವೂ
ಪ್ರಾರ್ಥಿಸುತ್ತಿರುವುದೊಂದೆ
ನಿನ್ನಾ ಸಂತೋಷ..!!

ಎಂದೂ ನಿನ್ನಾ ನೋವನ್ನು ಸಹಿಸದ.,
ಸಹಿಸಿ ಬದುಕದ
ಕಲ್ಮಷವಿರದ ಜೀವವಿದು..
ಬಯಸುತ್ತಿರುವುದೊಂದೆ
ಆರದಿರಲಿ ನನ್ನ ಹೃದಯದ ಸ್ನೇಹದ
ಪ್ರೀತಿಯ ನಂದಾದೀಪವೆಂದು..!!

ಹೋಗಿ ಬಾ ಮನವೇ.., ನಾ ಹಾರೈಸುವೆನು...

ಈ ಜೀವನದ ಮೆಟ್ಟಿಲಿನ ಬರೀ ಒಂದು
ಹಂತ ನೀನು...
ಬಾಳಲ್ಲಿ ಸಂತಸವಾ ಮರಳಿಸಲು ಬಂದ
ಸಾಮಾನ್ಯ
ಜೀವ ನಾನು..!!

ಕಳೆದು ಹೋದ ಕನಸುಗಳೆಲ್ಲಾ.,
ಕವಿಯಬಾರದು ಮನಸ್ಸನ್ನು..
ಬೆಳೆಸುವಂಥಾ ಭಾವನೆಯಲ್ಲಾ.,
ಅರಳಿ ಬೆಳೆಸಲಿ ನಿನ್ನನ್ನು..!!

ನಗುವೊಂದೇ ನಿನಗಿರಲಿ ಎನ್ನುವ
ಈ ಮನಸು..
ಪ್ರೀತಿಯಲೇ ಶುಭಕೋರುತ್ತಿದೆ...

ಹೋಗಿ ಬಾ ಮನವೇ.., ನಾ ಹಾರೈಸುವೆನು...

ಉಳಿದಿರುವೆ ಎಷ್ಟು ದಿನ ನಾನಿಲ್ಲಿ...
ಪಯಣ ಸಾಗಿದೆ..,
ಮುಂದಿನ ದಾರಿಯಲಿ..!!

ಹೋಗಿ ಬಾ ಮನವೇ.., ನಾ ಹಾರೈಸುವೆನು...


Wednesday, 1 February 2012

ನೆನಪಿನ ಪುಟಗಳ ನಡುವೆ..!!
ಎಲ್ಲಾ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ..! ಕೆ.ಎಸ್.ನಿಸಾರ್ ಅಹಮ್ಮದ್ ಅವರು ಬರೆದಿರೋ ಈ ಹಾಡನ್ನ ಕೇಳ್ತಾ ಇದ್ರೆ ಎಲ್ಲೋ ಒಂದು ಕ್ಷಣ ನಮಗಾಗಿನೇ ಬರೆದಿರಬೇಕು ಅನ್ನಿಸಿ ಬಿಡುತ್ತೆ..! ಅಷ್ಟು ಭಾವುಕರು ನಾವು..! ಹೌದು ನೆನಪುಗಳೇ ಹಾಗೆ ಮರೆತಿದ್ದೀವಿ ಅಂತಾ ಅಂದುಕೊಂಡ್ರು ಕೆಲವೊಂದು ನೆಪವಾ ಮಾಡಿಕೊಂಡು ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ವೆ..! ಬೇಡವೆಂದರೂ ಬರೋ ಅತಿಥಿಗಳಾ ಹಾಗೆ..!


ನಿದ್ದೆಯಲ್ಲೂ ಸನಿಹ ಬಂದು ಬೇಡವೆಂದರೂ ಅಪ್ಪಿಕೊಂಡು ಕಾಡುವ ನೆಪಗಳೇ ಈ ನೆನಪುಗಳು.. ಕೇವಲ ನೆನಪುಗಳಷ್ಟೆ ತಾನೇ ಅಂತಾ ಬಿಟ್ಟು ಬಿಡೋಣ ಅನ್ಕೊಂಡ್ರೆ ಬೆನ್ನು ಹತ್ತಿದ ಹಳೆಯ ಸಾಲಗಾರನ ತರ ಪುನಃ ಹಿಂದಿನ ಕಡತಗಳನ್ನೆಲ್ಲಾ ತೆರೆದಿಡುತ್ತಾ ಹೋಗುತ್ತೆ..! ಹೀಗೆ ನೆನಪಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಇದ್ರೆ ಹಳೆಯ ನೆನಪುಗಳೆಲ್ಲಾ ಯಾವುದೋ ಜಿದ್ದಿಗೆ ಬಿದ್ದ ಹಾಗೆ ಒಂದರ ಮೇಲೊಂದು ನೆನಪುಗಳು ನಮ್ಮನ್ನು ಬಿಗಿದಪ್ಪಿಕೊಂಡು ಕಾಡೋಕೋ ಶುರು ಮಾಡುತ್ತಾ ಹೋಗುತ್ತೆ...! ಈ ಹಾಳಾದ ನೆನಪುಗಳ ಕೆಲಸ ಅದೇ ತಾನೆ.., ಒಂದು ಕಾಡೋದು ಇಲ್ಲಾ ಕಾಡಿಸೋದು..!

ಹಾಗೆ ಈ ನೆನಪುಗಳು ಅನ್ನೋ ವಿಷಯಾ ಬಂದಾಗ ಮಾತ್ರ ನಾವು ಅತೀ ಅನ್ನಿಸುವಷ್ಟು  ಭಾವುಕರಾಗಿ ಬಿಡ್ತೀವಿ..! ಯಾವುದಕ್ಕಾದರೂ ಅಂಟು ಮೆತ್ತಿಕೊಂಡು ಕುಳಿತುಬಿಟ್ರೆ ಅದರಿಂದ ಹೊರಗೆ ಬರೋ ಸಾಹಸವನ್ನೇ ಮಾಡೋದಿಲ್ಲಾ..! ಕಳೆದ ನೆನಪುಗಳನ್ನೆಲ್ಲಾ ಮೆಲುಕು ಹಾಕುತ್ತಾ ಯಾವುದೋ ಒಂದು ಗುಂಗಿನಲ್ಲಿ ಸಾಗೋ ಈ ಮನದಲ್ಲಿ ನಮಗೆ ಒಬ್ಬ ಜೀವಾ, ಒಬ್ಬ ಹಿಮವಂತ, ಒಬ್ಬಳು ಶರ್ಮಿಳಾ ತರಾನೇ ನಾವು ಬದುಕಿಬಿಟ್ರೆ ಎಷ್ಟು ಚೆನ್ನ ಅನ್ನಿಸೋದು ಉಂಟು... ಇವೆಲ್ಲಾ ಕಾದಂಬರಿಯಲ್ಲಿನ ಕೇವಲ ಕಲ್ಪನಾ ಪಾತ್ರಗಳಾದರೂ ಕೂಡ ಅದೇಕೋ ನಮಗೆ ಹಾಗೇನೆ ಇದ್ದು ಬಿಡೋಣ ಅನ್ನಿಸುತ್ತೆ.., ಅವುಗಳ ಹೊರತಾಗಿ ಬೇರೇನೂ ಈ ಮನಸ್ಸಿಗೆ ಇಷ್ಟವಾಗೋದಿಲ್ಲಾ..! ಆ ಮಟ್ಟಿಗಿನ ಹುಚ್ಚು ಭಾವುಕರು ನಾವು..:)


ನೆನಪಿನ ಪುಟಗಳನ್ನ ತಿರುವಿ ಹಾಕ್ತಾ ಇದ್ರೆ ನಮ್ಮ ಅರಿವಿಗೆ ಬರದೇನೇ ಸಾವಿರ ಪ್ರಶ್ನೆಗಳು ಎಲ್ಲಿಂದಲೂ ಬಂದು ಮನದಲ್ಲಿ ಮನೆಮಾಡುತ್ತವೆ..!
ಕಾರಣವಿಲ್ಲದೆ ಹತ್ತಿರ ಬಂದೋರೋ ಕಾರಣ ಹೇಳದೆ ದೂರವಾಗ್ತಾರೆ... ಇನ್ನು ಕೆಲವರು ಕಾರಣ ಇಟ್ಟುಕೊಂಡೇ ಬಂದ್ರು ಆ ಕಾರಣ ತಿಳಿಸದೆ ಹೊರಟಿ ನಿಲ್ತಾರೆ..! ಕಾಲ ಸರಿಯುತ್ತಾ ಹೋದಂತೆ ಕೇವಲ ನೆನಪುಗಳಾಗಿ ಮನದ ಯಾವುದಾದರೊಂದು ಮೂಲೆಯಲ್ಲಿ ಸುಮ್ಮನೆ ಅಡಗಿ ಕುಳಿತು ಕೊನೆಗೆ ನೆನೆಪಿನ ಪುಟ ಸೇರಿ ಬಿಡ್ತಾರೆ..! ಹೀಗೆ ನಮ್ಮ ಬಾಳಿನಲ್ಲಿ ಎಷ್ಟೋ ಸಂಬಂಧಗಳು ಜೊತೆಯಾಗುತ್ತೆ.., ಎಷ್ಟೋ ಕಳಚಿ ಹೋಗುತ್ತೆ... ಆದರೆ ಹೋಗುವಾಗ ನೆನಪುಗಳಾ ಋಣನಾ ಮಾತ್ರ ನಮ್ಮ ಹೆಗಲ ಮೇಲೆ ಹೊರಸಿ ಹೋಗುತ್ತೆ..!


ಸವಿ ನೆನಪುಗಳು ಬೇಕು ಸವಿಯಲೀ ಬದುಕು... ನಿಜ... ಬದುಕೆಂದರೆ ಅದು ಒಂದು ನೆನಪಿನ ಸಾಗರ... ಸಾಲು ಸಾಲು ನೆನಪುಗಳು ಎದೆಯಾಳದಲ್ಲಿ ಅವಿತು ಕುಳಿತಿರುತ್ತವೆ... ಯಾವುದೋ ಒಂದು ಸಮಯದಲ್ಲಿ ಫಕ್ಕನೆ ಎದ್ದು ಬಂದು ಮನಸ್ಸಿಗೆ ಸಂತೋಷವನ್ನು ನೀಡಿದರೆ ಮರುಕ್ಷಣದಲ್ಲೇ ಅದರ ಹಿಂದೆ ನೋವನ್ನು ನೀಡಿ ಕಣ್ಣಂಚಿನ ಕಣ್ಣೀರ ಹನಿಯಾ ಜೊತೆ ಅವು ಕಣ್ಮರೆಯಾಗುತ್ತವೆ..! ಈ ನೆನಪುಗಳೆ ಹಾಗೆ ತುಂಬಾ ನಿಗೂಢ..!! ನಮ್ಮ ನೆನಪಿನ ನೋವುಗಳು ನಾವೇ ಪ್ರೀತಿಸುವ ಮಳೆಯಲ್ಲಿ ಬರುವ ಕಣ್ಣೀರಿನಂತೆ.. ಆ ಕಣ್ಣೀರು ನಮಗೆ ಬಿಟ್ಟರೆ ಇನ್ಯಾರಿಗೂ ತಿಳಿಯೋದೆ ಇಲ್ಲಾ..!

ಬಾಳಿನ ಏರುದಾರಿಯಲ್ಲಿ ಸಾಗುತ್ತಿರುವ ನಮಗೆ ಮುಂದೊಂದು ದಿನ ಹಿಂತಿರುಗಿ ನಮ್ಮ ನೆನಪಿನ ಪುಟಗಳನ್ನು ನೋಡಿದಾಗ ಇದೇ ನೆನಪಿನ ನೋವುಗಳು ತುಟಿ ಅಂಚಿನಲ್ಲೊಂದು ಸಣ್ಣ ಮುಗುಳ್ನಗೆಯನ್ನು ಮೂಡಿಸಬಹುದು.., ಆದರೆ ಅನುಭವಿಸಿದ ನೋವಿಗೆ ತೆತ್ತ ಕಂದಾಯಕ್ಕೆ ಲೆಕ್ಕ ಬರೆದುಕೊಡುವವರುಂಟೆ..?
ಅದೆನೆಲ್ಲಾ ಇದ್ದರೂ ಕೂಡ ಬದುಕಿನ ಕೊನೆ ಹಂತದವರೆಗೂ ನೆನಪಿಗೆ ನೆನಪು ಮಾತ್ರ ಸೇರ್ಪಡೆಯಾಗುತ್ತಲೇ ಇರುತ್ತೆ..! ಒಂದು ಕಾಡೋಕೆ... ಇಲ್ಲಾ ಕಾಡಿಸೋಕೆ...!!

ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ.., ಜೊತೆಗೆ ಸಿಗೋ ಒಂದಷ್ಟು ಕಹಿ ನೆನಪುಗಳಿಂದ ಕಣ್ಣಂಚಲ್ಲಿ ತುಂಬಿಕೊಂಡ ನೀರಿನ ಜೊತೆ ಸಾಗಿದೆ ಈ ಜೀವನಾ..!!