Monday, 14 November 2011

ಅಮ್ಮಾ ನಿನಗಾಗಿ...

ಅಮ್ಮಾ... ನಿನ್ನ ನೆನಪುಗಳಿಗೀಗಾ ಪೂರ್ತಿ ವರ್ಷ.., ಹಾಗೆ ಈ ಜೀವದ ಆಸೆ, ಕನಸುಗಳೆಲ್ಲಾ ಬತ್ತಿ ಹೋಗಿ ಕೂಡ ವರ್ಷವೇ ಕಳೆದಿದೆ... ಆದರೆ ಇಂದೇಕೋ ನೀ ನನ್ನನ್ನು ಬಿಟ್ಟು ಹೋಗಿದ್ಯಾಕೆ ಅನ್ನೋ ಪ್ರಶ್ನೆ ನನ್ನಾ ತುಂಬಾ ಕಾಡ್ತಾ ಇದೆ.., ಅದಕ್ಕೆ ಕಾರಣ ತಿಳಿಸಲು ನೀನೆ ಇಲ್ಲಾ ಅನ್ನೋ ನಂಬಲಾರದ ಕಹಿ ಸತ್ಯ ಕೂಡ ನನ್ನೊಟ್ಟಿಗಿದೆ..!:(


ಬೆಟ್ಟದಷ್ಟು ಪ್ರೀತಿಯ ಧಾರೆ ಎರೆದು., ಬದುಕಿನಲ್ಲಿ ಬರುವ ಸವಾಲುಗಳನೆಲ್ಲಾ ಹೆದರಿಸಲು ಧೈರ್ಯವಾ ತುಂಬಿ., ಬಾಳಿನ ಅರ್ಥವನ್ನ ತಿಳಿಸಿ., ನಗುತ್ತಾ ನನ್ನ ಬೆಳೆಸಿ... ಕಾಣದೆ ಕಣ್ಮರೆಯಾಗಿ ಹೋದೆಯಲ್ಲಾ ಯಾಕೆ..?
ಬೆಳೆದ ಬಳ್ಳಿಗೆ ಮರದ ಆಸರೆ ಇನ್ನೇತಕೆ ಎಂದು ತಪ್ಪು ತಿಳಿದುಬಿಟ್ಟೆಯಾ ಅಮ್ಮಾ.. ಮರದ ಆಸರೆ ಇಲ್ಲದೆ ಬಳ್ಳಿಯಾದರೂ ಹೇಗೆ ತಾನೇ ಬದುಕೀತು ಅನ್ನೋದು ತಿಳಿಯದೇ ಹೋಯಿತಾ ನಿನಗೆ..?:(


ನನಗಿನ್ನೂ ಚೆನ್ನಾಗಿ ನೆನಪಿದೆ ಅಮ್ಮಾ.., ನಿನ್ನ ಜೊತೆ ಹೋಗುವಾಗ ದಾರಿಯಲ್ಲಿ ಯಾರಾದರೂ ಅನಾಥ ಮಕ್ಕಳನ್ನ ನೋಡಿದರೆ ನೋವು ಪಡುತ್ತಿದ್ದ ನಿನಗೆ.., ನನ್ನನ್ನೆ ಅನಾಥೆಯಾಗಿ ಮಾಡಿ ಹೋಗವ ಮನಸ್ಸಾದರೂ ಹೇಗೆ ಬಂತು..?
ಯಾರ ಪ್ರೀತಿಯಿಂದ ವಂಚಿತರಾದ್ರೂ ಅಮ್ಮನಾ ಪ್ರೀತಿ, ವಾತ್ಸಲ್ಯದಿಂದ ವಂಚಿತರಾದವರು ತುಂಬಾ ನತದೃಷ್ಠರು ಅಂತೇಳುತ್ತಿದ್ದೆ ನೀನು.., ಆದರೀಗ ನಿನ್ನ ಮಮತೆ, ಪ್ರೀತಿ, ವಾತ್ಸಲ್ಯಗಳಿಂದ ವಂಚಿತಳಾಗಿರುವ ನಾನೂ ಕೂಡ ನತದೃಷ್ಠಳೇ ಅಲ್ಲವಮ್ಮಾ..!


ನೀನಿಲ್ಲದೆ ಕ್ಷಣ ಕಾಲ ಕೂಡ ರೆಪ್ಪೆ ಮುಚ್ಚಲು ಹೆದರುತ್ತಿದ್ದ ಕಣ್ಣುಗಳೀಗಾ ನಿನ್ನಾ ಕಾಣದೆ ಕಂಗಾಲಾಗಿ ಕತ್ತಲೆಯಲ್ಲಿ ನಿನ್ನನ್ನು ಹುಡುಕುತ್ತಾ ಸುರಿಸುತ್ತಿರುವ ಕಣ್ಣೀರು ಕಾಣಿಸುತ್ತಿಲ್ಲವಾ ನಿನಗೆ..?
ನಾ ಹುಟ್ಟಿದಾಗ ನೀನು ಪಟ್ಟಿದ್ದ ಸಂತಸ ಅದೆಷ್ಟೋ ಆದರಿಂದು ನಿನ್ನನ್ನು ಕಳೆದುಕೊಂಡು ಈ ಜೀವ ಅನುಭವಿಸುತ್ತಿರುವ ನೋವು ಎಷ್ಟೆಂದು ನಿನಗೆ ತಿಳಿಯುತ್ತಿಲ್ಲವಾ ಅಮ್ಮಾ..?



ದಿನಕ್ಕೆ ಸಾವಿರ ಸಾವಿರ ಸಾರಿ ಕರೆಯುತ್ತಿದ್ದೇನಲ್ಲಾ ಪ್ರತಿ ವಿಷಯಕ್ಕೂ ನಿನ್ನಾ ಅಮ್ಮಾ.. ಅಮ್ಮಾ.. ಎಂದು... ಕಿಂಚಿತ್ತು ಬೇಸರಿಸದೆ ನನ್ನೆಲ್ಲಾ ಕರೆಗೂ ಸ್ಪಂದಿಸುತ್ತಿದ್ದ ನಿನಗೆ.., ನಾನು ಹೊರಟು ಹೋದರೆ ನನ್ನಾ ಮಗಳಿಗೆ ಆಸರೆಯಾಗುವವರು ಯಾರು., ನಾನಿರದೆ ಆ ನನ್ನ ಜೀವವಾವದರೂ ಹೇಗೇ ತಾನೇ ಬದುಕಲು ಸಾಧ್ಯ ಅನ್ನೋ ಕನಿಕರವೂ ನನ್ನ ಮೇಲಿರದೆ ಬಿಟ್ಟು ಹೋದೆಯಾ ನನ್ನಾ..?

ಉತ್ತರವಿಲ್ಲದ ಸಾವಿರಾರು ಪ್ರಶ್ನೆಗಳನ್ನು ಮನದಲ್ಲಿ ತುಂಬಿಕೊಂಡು.., ಸರಿ-ತಪ್ಪುಗಳ ಅರಿವಿಲ್ಲದೆ ಪರಿತಪಿಸುತ್ತಿರುವ ಈ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು ನೀನಿರಬೇಕಿತ್ತು...

ಈ ಜನ್ಮದಲ್ಲಿ ನೀ ಕೊಟ್ಟಾ ಪ್ರೀತಿಯಾ ಋಣ ತೀರಿಸಲು ಇನ್ನೆಷ್ಟೂ ಜನ್ನವೆತ್ತಿದರೂ ಸಾಲದು... ಈ ಬದುಕಿನಲ್ಲಿ ನೀ ಬಿಟ್ಟು ಹೋಗಿ ಬರಿದಾಗಿರುವ ಸ್ಥಾನವನ್ನಾ ತುಂಬಲು ಯಾರಿಂದಲೂ ಸಾಧ್ಯವಿಲ್ಲಾ..:(

ಮರುಜನ್ಮವೊಂದಿದ್ದರೆ ನಿನ್ನಾ ಮಗಳಾಗಿ ಹುಟ್ಟಿ.., ನಿನ್ನಾ ಋಣವನ್ನು ಕಿಂಚಿತ್ತಾದರೂ ತೀರಿಸುವ ಅವಕಾಶ ನನಗೆ ಕೊಡು...
ಖಂಡಿತಾ ಕೊಡುತ್ತಿಯಲ್ಲಾವಾ ಅಮ್ಮಾ..:(:(