Thursday, 15 September 2011

ಸುರಿವ ಮಳೆ ಜೊತೆಯೊಂದಷ್ಟು ಕಾಡುವ ನೆನಪುಗಳು..!

ಮತ್ತದೆ ಮಳೆ.., ಮತ್ತದೆ ನೆನಪುಗಳು..!
ಹೌದು ಮಳೆ ಅಂದ್ರೆನೇ "ಬೆಂಬಿಡದೆ" ಕಾಡುವ ನೆನಪುಗಳ 'ಮೆರಮಣಿಗೆ'..! ಮಳೆ ಬಂತೆಂದರೆ ಸಾಕು.., ಮನಸ್ಸಿನಲ್ಲಿ ನೆನಪುಗಳ "ಜಡಿ ಮಳೆನೇ" ಶುರುವಾಗುತ್ತೆ..! 'ನೆನಪುಗಳಿಗೇನು ಬರಲಿಕ್ಕೊಂದು ಕಾರಣ ಬೇಕಷ್ಟೆ'..!


ಒಂಟಿತನದ ಸಂಜೆ.., ಮನಸ್ಸಿನಲ್ಲೆನೋ ಒಂದು ರೀತಿ "ನೀರವ ಮೌನ..!" ಭಾರೀ ಮಳೆಯ 'ನೀರಿಕ್ಷೆ' ಎಂಬಂತೆ ಕಿಟಕಿಯಿಂದ ಬೀಸುತ್ತಿರುವ 'ತಂಗಾಳಿ' ಬಂದು "ಮೈ ಸೋಕಿದಾಗ" ಏನೋ ಒಂದು ರೀತಿಯ 'ರೋಮಾಂಚನ..!' ನನ್ನ ಮನಸ್ಸು ಕೂಡ "ಅರಳತೊಡಗಿತು"... ಎದ್ದು ನೋಡಲು ಮನಸ್ಸಿಲ್ಲದಿದ್ದರೂ 'ಆ ತಂಗಾಳಿಗೆ' ಮನಸೋತ ಮನಸ್ಸು.., ಎದ್ದು ಹೋಗಿ ಕಿಟಕಿಯ ಬಳಿ ನಿಂತಾಗ ಅದಾಗಲೇ "ಮಳೆ ಹನಿಗಳು" ಧರೆಯನ್ನು 'ಮುತ್ತಿಕ್ಕತೊಡಗಿದ್ದವು..!' ಆ ಸೋನೆ ಮಳೆ ಮತ್ತು ತಂಗಾಳಿಗೆ ಸೋತ ಮನಸ್ಸು ಒಂದೊಂದಾಗಿ ನೆನಪುಗಳ ಬೆನ್ನೇರತೊಡಗಿತು..!

ಈ ಮಳೆನೇ ಹಾಗೆ ಮಣ್ಣಿನ ವಾಸನೆ ಮೂಗನ್ನು.., ತಂಗಾಳಿಯೊಂದಿಗೊಂದಷ್ಟು ನೆನಪನ್ನು ಹೊತ್ತು ತರುತ್ತೆ... ಹಾಗೆ ಮಳೆಯ ಯಾವುದೋ ಒಂದು ಗುಂಗಿನಲ್ಲಿ 'ಹಿಂದೆ' ಕಳೆದ ಜೀವನ ನೆನಪಿಸಿಕೊಂಡಾಗ "ಕಣ್ಣಂಚಿನಲ್ಲಿ ತುಂಬಿದ ನೀರು" ಧಾರಕಾರವಾಗಿ ಹರಿದು ಮತ್ತೆ "ಮನಸ್ಸಿನಲ್ಲೊಂದು ರೀತಿ ಮೋಡ ಆವರಿಸುತ್ತೆ..!"


ಮಳೆ ಅಂದ ತಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ಯಾವುದಾದರೊಂದು ನೆನಪು ಸಹಜವಾಗಿನೇ ಕಣ್ ಮುಂದೆ ಬಂದು ಹೋಗುತ್ತೆ..! ಒಂದು ರೀತಿಲೀ ಹೇಳಬೇಕು ಅಂದ್ರೆ 'ಈ ಮಳೆ ನಮ್ಮ ಅಂತರಾಳವನ್ನು ಬಿಂಬಿಸುತ್ತೆ..!' ಕೆಲವೊಂದು ಸಲ ಓಡಿ ಹೋಗಿ ಮಳೆಯಲ್ಲಿ ನೆನೆದು.., ಮನಸ್ಸಿನ ಭಾರವೆಲ್ಲಾ ಕಳೆದು ಬಿಡೋಣ ಅನ್ಸುತ್ತೆ... ಹಾಗೆ ಕೆಲವೊಂದು ಸಲ ಮನದಾಳದ ಮಾತನೆಲ್ಲಾ ಮಳೆರಾಯನಿಗೆ ಕೇಳುವಂತೆ ಹೇಳಿ ಅಳುವುದು ಉಂಟು..!


ಬಹು ದಿನಗಳ ನೋವಿಗೆ ಸಿಕ್ಕ 'ಬಿಡುಗಡೆಯಂತೆ' ಹೊರಗೆ ಜುರ್ರೋ ಎಂದು ಸುರಿಯುತ್ತಿರುವ ಮಳೆ... ಹಾಗೆ ಸುರಿದ ಮಳೆ ನೆಲವನ್ನು ಅಪ್ಪಿ ಚಿಮ್ಮುತ್ತಿದ್ದಂತೆ ನೆನಪಿನ ಪುಟಗಳು ಒಂದೊಂದಾಗಿ ಬಿಚ್ಚಿಕೊಳ್ಳಲು ಶುರುವಾಯ್ತು..!


ಒಂದು ಮಳೆ ಈ ಪರಿಯಾಗಿ ಮನಸ್ಸನ್ನು ಕಾಡುತ್ತಾ..?
ಮಳೆ ಬಂದರೆ ಭಾವನೆಗಳು.., ಹಳೆ ನೆನಪುಗಳು ಮರುಕಳಿಸುತ್ತಾ..?
ಖಂಡಿತ ಹೌದು..!
ಮನಸ್ಸು ಮಳೆಯಲ್ಲಿ ಈ ಪರಿಯಾಗಿ ಪರಿತಪಿಸುತ್ತೆ ಅಂತಾ ಗೊತ್ತಾಗಿದ್ದು ಇದೇ ಮಳೆಯಿಂದಾನೇ..!ಈ ಪ್ರೀತಿಗೂ.., ಮಳೆಗೂ ಏನೋ ಒಂದು ರೀತಿಯ ಅವಿನಾಭಾವ ಸಂಬಂಧ ಇದೆ... ಪ್ರೀತಿಗೆ ಮಳೆ ಬೇಕು.., ಹಾಗೆ ಆ ಪ್ರೀತಿಯಿಂದಾದ ನೋವಿಗೂ ಕೂಡ ಮಳೆನೇ ಬೇಕು..!
ಸುರಿಯುತ್ತಿರುವ ರಾಶಿ ರಾಶಿ ಮಳೆಹನಿಗಳ ಜೊತೆ ಜೊತೆಯಲ್ಲೆ ಮನಸ್ಸಿನಲ್ಲಿ ಅಡಗಿರೋ ನೋವಿನ ಮೋಡವನೆಲ್ಲಾ ಕಣ್ಣೀರಾಗಿ ಕರಗಿಸಿ ತನ್ನೊಡಲಿಗೆ ಸೇರಿಸಿಕೊಂಡುಬಿಡೋ ಬಯಕೆ ಈ ಮಳೆಗೆ..!
ಹಾಗೆ ಮಳೆ ಬಂದಾಗೆಲ್ಲಾ ಈ ಮನಸ್ಸಿನಲ್ಲಿ ಅಚ್ಚಳಿಯದೇ ನಿಲ್ಲೋದು ಒಂದೆ.., ನಿನ್ನ ಪ್ರೀತಿ ತುಂಬಿದ ನೆನಪು ಮಾತ್ರ..! ಧಾರಾಕಾರವಾಗಿ ಸುರಿದು ಒಮ್ಮೇಲೆ ನಿಂತು ಹೋಗೋ ಮಳೆಯ ಹಾಗೆ ಕೇಳದಿದ್ದಾಗ ಬೆಟ್ಟದಷ್ಟು ಪ್ರೀತಿ ಚೆಲ್ಲಿ.., ಬೇಕೆನಿಸಿದಾಗ ಒಂದು ಹನಿಯನ್ನು ನೀಡದೆ ಕಣ್ಮರೆಯಾಗಿ ಹೋದೆಯಲ್ಲಾ.., ಅದರ ಗುರುತು ಈ ಮನದಲ್ಲಿ ಅಚ್ಚಾಗಿ ಉಳಿದು ಬಿಡುತ್ತದೆಯೆಂಬಾ ಕನಿಷ್ಠ ಕಲ್ಪನೆನೂ ಕೂಡ ನಿನಗಿಲ್ಲವಾಗಿ ಹೋಯಿತಾ ಹುಡುಗ..!
ಈ ಬದುಕಿನಲ್ಲಿ ಭಾವನೆಗಳ ಮಳೆ ಸುರಿದು ನಿಂತು ಹೋದ ಮೇಲೆ ತೊಟ್ಟಿಕುವ ಹನಿಗಳಂತೆ ನಿನ್ನ ನೆನಪು ಕೂಡ ಸದಾ ಇರುತ್ತೆ..! ಕೊನೆಯದಾಗಿ ಈ ಮಳೆ ಬಂದಾಗಲೆಲ್ಲಾ ನಿನ್ನ ನೆನಪು ಬರುವುದು ಯಾಕೆ ಎಂಬ ಪ್ರಶ್ನೆ.., ಈ ಮನದಲ್ಲಿ ಇನ್ನು ಪ್ರಶ್ನೆಯಾಗಿಯೇ ಉಳಿದು ಬಿಟ್ಟಿದೆ... ಉತ್ತರ ನಿನಗೇನಾದರೂ ಗೊತ್ತಿದ್ದರೆ ಕನಸಿನಲ್ಲಾದರೂ ಒಮ್ಮೆ ಬಂದು ತಿಳಿಸಿ ಬಿಡು..!:-(ಯಾಕೋ ಈ ಮಳೆ ನನ್ನನ್ನು ಬಿಡದಂತೆ ಗಟ್ಟಿಯಾಗಿ ಅಪ್ಪಿಕೊಂಡು ಬಿಟ್ಟಿದೆ ಅನ್ನಿಸಿ.., ಎಡಬಿಡದೆ ಬರುತ್ತಿದ್ದ ನೆನಪುಗಳಿಗೆ ಸ್ವಲ್ಪ Break ನೀಡಿ ವಾಸ್ತವಕ್ಕೆ ಬಂದಾಗ "ಮಳೆ ನೋಡುತ್ತಾ ಕಿಟಕಿಯ ಮುಂದೆ ನಿಂತಿದ್ದ ನನಗೆ ಮಳೆ ನಿಂತಿದ್ದು ಅರಿವಿಗೆ ಬಂದಿರಲಿಲ್ಲ..!" ಮಳೆ ಅದಾಗಲೆ Good Bye ಹೇಳಿ ಆಗಿತ್ತು... ಮಳೆ ನಿಂತಿದೆ... ಆದರೆ ಮಳೆಯ ನೀರಿನಿಂದಾಗಿ ಅಂಗಳದ ಮಣ್ಣೆಲ್ಲಾ ಒದ್ದೆ ಒದ್ದೆ.., ಹಾಗೆ ಮನಸ್ಸು ಕೂಡ..! ಮಣ್ಣಿನಾ ಜೊತೆಗೆ ಮನಸು ಕೂಡ ಒಣಗಿ ಗಟ್ಟಿಯಾಗಬೇಕು ಅಂದ್ರೆ.., ಕನಿಷ್ಠ ಇನ್ನೆರಡು ದಿನಗಳಾದರೂ ಬೇಕು... ಅದೂ ಮತ್ತೊಮ್ಮೆ ಮಳೆ ಬಾರದಿದ್ದರೆ..!

2 comments:

  1. nice thumba chennagide mathu mana muttuvanthide..

    ReplyDelete
  2. bhaavuka manasu kelavomme tumba sala nammanna nammindale doora karedoyyutte...nemmadiya naalegalu ninnavaagali..


    preetiyinda,

    ReplyDelete