Tuesday, 30 October 2012

ಮುದ್ದಾದ ಪ್ರೀತಿಗೆ... ಅದರ ರೀತಿಗೆ... ಈ ಪ್ರೀತಿಯೇ ಕಾಣಿಕೆ..!!!


ತುಂಬಾ ದಿನದ ನಂತರ Blog Update ಮಾಡೋ ಮನಸಾಗಿ., ಬಿಡುವಿಲ್ಲದ ಈ Lyfಗೆ ಮನಸ್ಸಲ್ಲೇ ಶಪಿಸುತ್ತಾ... ಯಾವ ವಿಷಯದ ಬಗ್ಗೆ ಬರೀಬೇಕು ಅಂತಾ ಯೋಚಿಸ್ತಾ ಇದ್ದಾಗ ಈ ಮನಸ್ಸಿನಲ್ಲಿ ಮೂಡಿದ್ದು "ಪ್ರೀತಿ" ಎಂಬ ಎರಡೇ ಅಕ್ಷರ..!!! ಎಂಥವರನ್ನು ಸಹ ಕ್ಷಣಕಾಲ ಮೂಕವಿಸ್ಮಿತರನ್ನಾಗಿಸಿ ಬಿಡುವ ಶಕ್ತಿ ಕೇವಲ ಪ್ರೀತಿಯೆಂಬ ಈ ಎರಡಕ್ಷರಕ್ಕಿದೆ ಎಂದರೆ ಅಚ್ಚರಿಪಡುವಂತಾದ್ದು ಏನು ಇಲ್ಲಾ.. Bcoz ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಒಂದು ಭಾರಿಯಾದರೂ ಅದು ಅನುಭವಕ್ಕೆ ಬಂದಿರುತ್ತದೆ..!! ಸದ್ಯ ಈ ಮನಸು ಸಹ "ಪ್ರೀತಿಯ" ಗುಂಗಿನಲ್ಲಿ ಇದಿದ್ದರಿಂದಲೋ ಏನೋ ಅದರ ಬಗ್ಗೆ ಬಿಟ್ಟು ಬೇರೆ ಯಾವ ವಿಷಯದ ಬಗ್ಗೆಯೂ ಬರೆಯುವ ಮನಸ್ಸಾಗಲಿಲ್ಲ..!! :-) :-)

ಹೌದು ಈ ಪ್ರೀತಿ ಅಂದರೇನು?? ಅದು ಎಲ್ಲಿ ಹುಟ್ಟುತ್ತೆ?? ಎಲ್ಲಿ ಕೊನೆಯಾಗುತ್ತೆ??
ಪ್ರತಿಯೊಬ್ಬರಿಗೂ ಈ ತರದ ಪ್ರಶ್ನೆಗಳು ತಲೆಯಲ್ಲಿ ಸುಳಿದಾಡಿ ಹೋಗಿರುತ್ತೆ... "ಪ್ರೀತಿ" ಎಂದರೆ ವ್ಯಾಖ್ಯಾನಕ್ಕೆ ನಿಲುಕದ., ತರ್ಕಕ್ಕೆ ಸಿಗದ ಒಂದು ಮಧುರ ಬಾಂಧವ್ಯ..!!! ಅದು ಹೇಗೋ., ಎಲ್ಲೋ ಹುಟ್ಟಿದರೂ ಕೂಡ ಕೊನೆಯಂಬುದು ಮಾತ್ರ ಅದಕ್ಕಿಲ್ಲ..!!
ಪ್ರೀತಿಯೆಂದರೆ ಆಕಾಶದಲ್ಲಿ ಸ್ವಚಂಧವಾಗಿ ಹಾರಾಡೋ ಹಕ್ಕಿಯಾ ತರ.. ಯಾವುದೇ ತರವಾದ ಎಲ್ಲೇ ಆಗಲಿ., ಬಂಧವಾಗಲಿ ಅದಕ್ಕೆ ಇಲ್ಲಾ..!! ಹಾಗೇ ಈ ಪ್ರೀತಿಗೆ ಅತ್ಯವಶ್ಯಕವಾಗಿ ಬೇಕಾದ್ದು ಜೊತೆಗಿದ್ದು ಜೋಪಾನ ಮಾಡೋ ಒಂದು ಹೃದಯಾ., ಜೊತೆಗೊಂದಷ್ಟು ಅಕ್ಕರೆಯ ನುಡಿ., ಸ್ವಲ್ಪ ಕಾಳಜಿ ಹಾಗೂ ಯಾವುದನ್ನಾದರೂ ಸಹನೆಯಿಂದ ಆಲಿಸುವ ಭಾವ..!! ಅಷ್ಟನಲ್ಲದೆ ಬೇರೇನನ್ನು ಬಯಸುವುದಿಲ್ಲ "ಈ ಪ್ರೀತಿ"..!!

"ಪ್ರೀತಿ" ಅನ್ನೋದು ಒಂದು ಸುಂದರ ಬಾಂಧವ್ಯ... ಎರಡು ಹೃದಯಗಳನ್ನು ಒಂದು ಮಾಡೋ ಸುಮಧುರ ಅನುಬಂಧ..!! ಬದುಕಿನ ಪ್ರತಿ ಹಾದಿಯಲ್ಲೂ., ಪ್ರತಿ ಹಂತದಲ್ಲೂ., ಜಗತ್ತಿನಾದ್ಯಂತ ಎಲ್ಲರೂ ಬಯಸುವ ಒಂದು ಮಧುರ ಅನುಭವ ಈ ಪ್ರೀತಿ ಅಂದರೆ ತಪ್ಪಾಗಲ್ಲ... ಹಾಗೆ ಈ ಪ್ರೀತಿ ಒಂದು ಸಲ ಹೃದಯ ಸ್ಪರ್ಶಿಸಿತು ಅಂದರೆ ಅದರ ಅನುಭವ., ಅನುಭವಿಸಿದವರಿಗಷ್ಟೇ ಗೊತ್ತು..!! ಎಂಥಾ ಕಲ್ಲು ಮನಸ್ಸಾನಾದರೂ ಕರಗಿಸಿ ಬಿಡುವಂತ ಶಕ್ತಿ ಈ ಪ್ರೀತಿಗಿದೆ..!!

ಪ್ರೀತಿ ಅಂದರೆ ಅದೊಂದು ನಂಬಿಕೆ... ನಿನ್ನಾ ಜೊತೆ ನಾನೀದ್ದೀನಿ ಅನ್ನೋ ಭರವಸೆ... ತಾ ಪ್ರೀತಿಸಿದ ಜೀವ ಅದು ಈ ಭೂಮಿಯ ಮೇಲೆ ಎಲ್ಲೇ ಇದ್ದರೂ ಚೆನ್ನಾಗಿರಲಿ ಅನ್ನೋ ನಿಸ್ವಾರ್ಥ ಭಾವ ಬಹುಶಃ ಈ ಪ್ರೀತಿಗಲ್ಲದೆ ಮತ್ತ್ಯಾವುದಕ್ಕೂ ಇರಲಿಕ್ಕಿಲ್ಲಾ.. ಯಾಕೆಂದರೆ ಪ್ರೀತಿನಾ ಪಡೆದುಕೊಳ್ಳುವುದಕ್ಕಿಂತ ಕೊಡೋದರಲ್ಲೇ ಜಾಸ್ತಿ ಖುಷಿ ಇರೋದು..!! ಒಂದು ನಿಷ್ಕಲ್ಮಶ ಪ್ರೀತಿಗೆ ಯಾರು ಯಾವತ್ತು ಮೋಸ ಮಾಡೋಕೆ ಆಗಲ್ಲಾ.., ಹಾಗೊಂದುವೇಳೆ ಮಾಡಿದರೂ ಕೂಡ ಅದು ಅವರಿಗೆ ಅವರೇ ಮಾಡಿಕೊಂಡ ಮೋಸವಾಗಿರುತ್ತೆ ಹೊರತು ಪ್ರೀತಿಗಲ್ಲಾ..!!ಜೀವನದ ಪ್ರತಿ ಹಂತದಲ್ಲೂ ಮನಸು ತಾನೇ ತಾನಾಗಿ ಪ್ರೀತಿಯನ್ನು ಅರಸಿ ಹೋಗುತ್ತೆ... ಚಿಕ್ಕಂದಿನಲ್ಲಿ ಅಪ್ಪ, ಅಮ್ಮನಾ ಅಕ್ಕರೆಯ ಪ್ರೀತಿ... ಬೆಳೆಯುವಾಗ ಅಣ್ಣ, ತಮ್ಮಂದಿರೊಂದಿಗಿನ ಕಿತ್ತಾಟದ ಪ್ರೀತಿ., ಜೊತೆಗೆ ಸ್ನೇಹಿತರ ಮುದ್ದು ಪ್ರೀತಿ.. ಯೌವ್ವನದಲ್ಲಿ ಸಂಗಾತಿಯ ನೆಚ್ಚಿನ ಪ್ರೀತಿ... ವೃದ್ಯಾಪ್ಯದಲ್ಲಿ ಮಕ್ಕಳ ಭರವಸೆಯ ಪ್ರೀತಿ... ಪ್ರತಿ ಜೀವಿಗೂ., ಪ್ರತಿಯೊಬ್ಬರ ಜೀವನಕ್ಕೂ ಅತ್ಯವಶ್ಯಕ..!! ಪ್ರತಿಯೊಬ್ಬರೂ ಕೂಡ ಅವರ ಜೀವನದಲ್ಲಿ ಒಂದು ಮಹತ್ತರವಾದ ಸ್ಥಾನವನ್ನ ಈ ಪ್ರೀತಿಗೆ ಕೊಟ್ಟಿರ್ತಾರೆ., ಪ್ರೀತಿ ಇಲ್ಲದ ಜೀವಿ ಆಗಲಿ ಜೀವನ ಆಗಲಿ ಖಂಡಿತಾ ಈ ಭೂಮಿಯ ಮೇಲೆ ಎಲ್ಲೂ ಇರಲಿಕ್ಕಿಲ್ಲಾ..
ಅದನ್ನ ಅರಿತೇ ಇರಬೇಕು ಜಿ ಎಸ್ ಶಿವರುದ್ರಪ್ಪ ಅವರು 
"ಪ್ರೀತಿ ಇಲ್ಲದ ಮೇಲೆ..
ಹೂವು ಅರಳೀತು ಹೇಗೆ ?
ಮೋಡ ಕಟ್ಟೀತು ಹೇಗೆ ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ ?"
ಅಂತಾ ಬರೆದಿರೋದು..!! ಒಟ್ಟಿನಲ್ಲಿ ಈ ಪ್ರೀತಿಯಾ ಬಗ್ಗೆ ಯಾರೇ ಎಷ್ಟೇ ವರ್ಣಿಸಿದರೂ., ಏನನ್ನೆಲ್ಲ ಗೀಚಿ ಹೋಗಿದ್ದರೂ ಕೂಡ ಅದನ್ನು ಅರ್ಥೈಸೋಕೇ ಮಾತ್ರ ಯಾರಿಂದಲೂ ಸಾಧ್ಯವಿಲ್ಲ.. ಕೇವಲ ಅನುಭವಿಸಬಹುದಷ್ಟೆ..!! ಜೀವನದ ಪ್ರತಿ ಹೆಜ್ಜೆಯಲ್ಲೂ ಪ್ರೀತಿಯನ್ನು ಬಯಸುವ ನಮಗೆ ಅದರಿದ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯವೇ ಸರಿ.., ಪ್ರೀತಿಯಿಲ್ಲದ ಬದುಕು ಹಾಡಲು ಮರೆತ ಕೋಗಿಲೆಯಂತೆ ಅಕ್ಷರಶಃ ಜೀವಂತ ಶವ..!!

ಅಂತಾ ಒಂದು ಪ್ರೀತಿಯಾ ಬಗ್ಗೆ "ಈ ಮನಸಾದರೂ" ಇಷ್ಟೆಲ್ಲಾ ಯೋಚಿಸೋಕೆ ಕಾರಣ ಬಹುಶ: ಅಂತದೊಂದು ನಿಷ್ಕಲ್ಮಶ ಪ್ರೀತಿನೇ..!! :-) :-)
ಬರೀ ನೋವನಷ್ಟೆ ಕಂಡಿದ್ದ ಮನಸ್ಸಿಗೆ ಸಾಂತ್ವಾನ ಹೇಳಿ., ಧೈರ್ಯ ತುಂಬುತ್ತಿದ್ದ ಆ ನಿನ್ನ ಮಾತುಗಳಿಗೆ ಸೋತೋಯಿತೋ ಏನೋ ಈ ಮನಸು ಗೋತ್ತಿಲ್ಲ..!! ಈ ಹೃದಯವೆಂಬ ಹೂದೋಟದಲಿ ಪ್ರೀತಿಯ ಹೂವರಳಿಸಿದೆ... ಯಾವ ಜನ್ಮದ ಅನುಬಂಧವೋ ನೀ ಬಂದೆ ಬೆಳಕಾಗಿ ಕತ್ತಲು ಕವಿದ ಬಾಳಿಗೆ..!!
ಎಂದೂ ಬಯಸಿರದ ನಿಸ್ವಾರ್ಥ ಪ್ರೀತಿ ತನ್ನದಾದ ಸಂತಸದಲ್ಲೇ ಈ ಮನವೂ ಕೂಡ ಧನ್ಯವಾಗಿದೆ... ಆ ನಿನ್ನಾ ಮುಗ್ಧ., ನಿಷ್ಕಲ್ಮಶ ಪ್ರೀತಿಗೆ ಪ್ರತಿಯಾಗಿ ಏನು ಕೊಡಬೇಕೋ ತಿಳಿಯುತ್ತಿಲ್ಲ ಕಣೋ..!! ಆದರೆ ಈ ಪೆದ್ದು ಮನಸ್ಸಿನ ಮುದ್ದು ಪ್ರೀತಿ ಎಂದೆಂದಿಗೂ ನಿನಗೆ ಮಾತ್ರ ಮೀಸಲು..!! ನನ್ನೊಟ್ಟಿಗಿದ್ದರೂ.., ಇರದಿದ್ದರೂ..!!! :-) :-)


ಮುದ್ದಾದ ಆ ನಿನ್ನಾ ಪ್ರೀತಿಗೆ... ಅದರ ರೀತಿಗೆ... ಈ ಪ್ರೀತಿಯೇ ಕಾಣಿಕೆ..!!
Friday, 10 February 2012

ಹೋಗಿ ಬಾ ಮನವೇ.., ನಾ ಹಾರೈಸುವೆನು...


ಹೋಗಿ ಬಾ ಮನವೇ.., ನಾ ಹಾರೈಸುವೆನು...ಬಾಳೆಂಬ ಪಯಣದಲಿ ಅರಿಯದೆ
ಜೊತೆಯಾದೆ...
ದಾರಿ ಕವಲಾಯಿತು...
ಮನಸು ಎರಡಾಯಿತು..!!

ಕಾಣದ ದೇವರ ಬಳಿ ಪ್ರತಿಕ್ಷಣವೂ
ಪ್ರಾರ್ಥಿಸುತ್ತಿರುವುದೊಂದೆ
ನಿನ್ನಾ ಸಂತೋಷ..!!

ಎಂದೂ ನಿನ್ನಾ ನೋವನ್ನು ಸಹಿಸದ.,
ಸಹಿಸಿ ಬದುಕದ
ಕಲ್ಮಷವಿರದ ಜೀವವಿದು..
ಬಯಸುತ್ತಿರುವುದೊಂದೆ
ಆರದಿರಲಿ ನನ್ನ ಹೃದಯದ ಸ್ನೇಹದ
ಪ್ರೀತಿಯ ನಂದಾದೀಪವೆಂದು..!!

ಹೋಗಿ ಬಾ ಮನವೇ.., ನಾ ಹಾರೈಸುವೆನು...

ಈ ಜೀವನದ ಮೆಟ್ಟಿಲಿನ ಬರೀ ಒಂದು
ಹಂತ ನೀನು...
ಬಾಳಲ್ಲಿ ಸಂತಸವಾ ಮರಳಿಸಲು ಬಂದ
ಸಾಮಾನ್ಯ
ಜೀವ ನಾನು..!!

ಕಳೆದು ಹೋದ ಕನಸುಗಳೆಲ್ಲಾ.,
ಕವಿಯಬಾರದು ಮನಸ್ಸನ್ನು..
ಬೆಳೆಸುವಂಥಾ ಭಾವನೆಯಲ್ಲಾ.,
ಅರಳಿ ಬೆಳೆಸಲಿ ನಿನ್ನನ್ನು..!!

ನಗುವೊಂದೇ ನಿನಗಿರಲಿ ಎನ್ನುವ
ಈ ಮನಸು..
ಪ್ರೀತಿಯಲೇ ಶುಭಕೋರುತ್ತಿದೆ...

ಹೋಗಿ ಬಾ ಮನವೇ.., ನಾ ಹಾರೈಸುವೆನು...

ಉಳಿದಿರುವೆ ಎಷ್ಟು ದಿನ ನಾನಿಲ್ಲಿ...
ಪಯಣ ಸಾಗಿದೆ..,
ಮುಂದಿನ ದಾರಿಯಲಿ..!!

ಹೋಗಿ ಬಾ ಮನವೇ.., ನಾ ಹಾರೈಸುವೆನು...


Wednesday, 1 February 2012

ನೆನಪಿನ ಪುಟಗಳ ನಡುವೆ..!!
ಎಲ್ಲಾ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ..! ಕೆ.ಎಸ್.ನಿಸಾರ್ ಅಹಮ್ಮದ್ ಅವರು ಬರೆದಿರೋ ಈ ಹಾಡನ್ನ ಕೇಳ್ತಾ ಇದ್ರೆ ಎಲ್ಲೋ ಒಂದು ಕ್ಷಣ ನಮಗಾಗಿನೇ ಬರೆದಿರಬೇಕು ಅನ್ನಿಸಿ ಬಿಡುತ್ತೆ..! ಅಷ್ಟು ಭಾವುಕರು ನಾವು..! ಹೌದು ನೆನಪುಗಳೇ ಹಾಗೆ ಮರೆತಿದ್ದೀವಿ ಅಂತಾ ಅಂದುಕೊಂಡ್ರು ಕೆಲವೊಂದು ನೆಪವಾ ಮಾಡಿಕೊಂಡು ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ವೆ..! ಬೇಡವೆಂದರೂ ಬರೋ ಅತಿಥಿಗಳಾ ಹಾಗೆ..!


ನಿದ್ದೆಯಲ್ಲೂ ಸನಿಹ ಬಂದು ಬೇಡವೆಂದರೂ ಅಪ್ಪಿಕೊಂಡು ಕಾಡುವ ನೆಪಗಳೇ ಈ ನೆನಪುಗಳು.. ಕೇವಲ ನೆನಪುಗಳಷ್ಟೆ ತಾನೇ ಅಂತಾ ಬಿಟ್ಟು ಬಿಡೋಣ ಅನ್ಕೊಂಡ್ರೆ ಬೆನ್ನು ಹತ್ತಿದ ಹಳೆಯ ಸಾಲಗಾರನ ತರ ಪುನಃ ಹಿಂದಿನ ಕಡತಗಳನ್ನೆಲ್ಲಾ ತೆರೆದಿಡುತ್ತಾ ಹೋಗುತ್ತೆ..! ಹೀಗೆ ನೆನಪಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಇದ್ರೆ ಹಳೆಯ ನೆನಪುಗಳೆಲ್ಲಾ ಯಾವುದೋ ಜಿದ್ದಿಗೆ ಬಿದ್ದ ಹಾಗೆ ಒಂದರ ಮೇಲೊಂದು ನೆನಪುಗಳು ನಮ್ಮನ್ನು ಬಿಗಿದಪ್ಪಿಕೊಂಡು ಕಾಡೋಕೋ ಶುರು ಮಾಡುತ್ತಾ ಹೋಗುತ್ತೆ...! ಈ ಹಾಳಾದ ನೆನಪುಗಳ ಕೆಲಸ ಅದೇ ತಾನೆ.., ಒಂದು ಕಾಡೋದು ಇಲ್ಲಾ ಕಾಡಿಸೋದು..!

ಹಾಗೆ ಈ ನೆನಪುಗಳು ಅನ್ನೋ ವಿಷಯಾ ಬಂದಾಗ ಮಾತ್ರ ನಾವು ಅತೀ ಅನ್ನಿಸುವಷ್ಟು  ಭಾವುಕರಾಗಿ ಬಿಡ್ತೀವಿ..! ಯಾವುದಕ್ಕಾದರೂ ಅಂಟು ಮೆತ್ತಿಕೊಂಡು ಕುಳಿತುಬಿಟ್ರೆ ಅದರಿಂದ ಹೊರಗೆ ಬರೋ ಸಾಹಸವನ್ನೇ ಮಾಡೋದಿಲ್ಲಾ..! ಕಳೆದ ನೆನಪುಗಳನ್ನೆಲ್ಲಾ ಮೆಲುಕು ಹಾಕುತ್ತಾ ಯಾವುದೋ ಒಂದು ಗುಂಗಿನಲ್ಲಿ ಸಾಗೋ ಈ ಮನದಲ್ಲಿ ನಮಗೆ ಒಬ್ಬ ಜೀವಾ, ಒಬ್ಬ ಹಿಮವಂತ, ಒಬ್ಬಳು ಶರ್ಮಿಳಾ ತರಾನೇ ನಾವು ಬದುಕಿಬಿಟ್ರೆ ಎಷ್ಟು ಚೆನ್ನ ಅನ್ನಿಸೋದು ಉಂಟು... ಇವೆಲ್ಲಾ ಕಾದಂಬರಿಯಲ್ಲಿನ ಕೇವಲ ಕಲ್ಪನಾ ಪಾತ್ರಗಳಾದರೂ ಕೂಡ ಅದೇಕೋ ನಮಗೆ ಹಾಗೇನೆ ಇದ್ದು ಬಿಡೋಣ ಅನ್ನಿಸುತ್ತೆ.., ಅವುಗಳ ಹೊರತಾಗಿ ಬೇರೇನೂ ಈ ಮನಸ್ಸಿಗೆ ಇಷ್ಟವಾಗೋದಿಲ್ಲಾ..! ಆ ಮಟ್ಟಿಗಿನ ಹುಚ್ಚು ಭಾವುಕರು ನಾವು..:)


ನೆನಪಿನ ಪುಟಗಳನ್ನ ತಿರುವಿ ಹಾಕ್ತಾ ಇದ್ರೆ ನಮ್ಮ ಅರಿವಿಗೆ ಬರದೇನೇ ಸಾವಿರ ಪ್ರಶ್ನೆಗಳು ಎಲ್ಲಿಂದಲೂ ಬಂದು ಮನದಲ್ಲಿ ಮನೆಮಾಡುತ್ತವೆ..!
ಕಾರಣವಿಲ್ಲದೆ ಹತ್ತಿರ ಬಂದೋರೋ ಕಾರಣ ಹೇಳದೆ ದೂರವಾಗ್ತಾರೆ... ಇನ್ನು ಕೆಲವರು ಕಾರಣ ಇಟ್ಟುಕೊಂಡೇ ಬಂದ್ರು ಆ ಕಾರಣ ತಿಳಿಸದೆ ಹೊರಟಿ ನಿಲ್ತಾರೆ..! ಕಾಲ ಸರಿಯುತ್ತಾ ಹೋದಂತೆ ಕೇವಲ ನೆನಪುಗಳಾಗಿ ಮನದ ಯಾವುದಾದರೊಂದು ಮೂಲೆಯಲ್ಲಿ ಸುಮ್ಮನೆ ಅಡಗಿ ಕುಳಿತು ಕೊನೆಗೆ ನೆನೆಪಿನ ಪುಟ ಸೇರಿ ಬಿಡ್ತಾರೆ..! ಹೀಗೆ ನಮ್ಮ ಬಾಳಿನಲ್ಲಿ ಎಷ್ಟೋ ಸಂಬಂಧಗಳು ಜೊತೆಯಾಗುತ್ತೆ.., ಎಷ್ಟೋ ಕಳಚಿ ಹೋಗುತ್ತೆ... ಆದರೆ ಹೋಗುವಾಗ ನೆನಪುಗಳಾ ಋಣನಾ ಮಾತ್ರ ನಮ್ಮ ಹೆಗಲ ಮೇಲೆ ಹೊರಸಿ ಹೋಗುತ್ತೆ..!


ಸವಿ ನೆನಪುಗಳು ಬೇಕು ಸವಿಯಲೀ ಬದುಕು... ನಿಜ... ಬದುಕೆಂದರೆ ಅದು ಒಂದು ನೆನಪಿನ ಸಾಗರ... ಸಾಲು ಸಾಲು ನೆನಪುಗಳು ಎದೆಯಾಳದಲ್ಲಿ ಅವಿತು ಕುಳಿತಿರುತ್ತವೆ... ಯಾವುದೋ ಒಂದು ಸಮಯದಲ್ಲಿ ಫಕ್ಕನೆ ಎದ್ದು ಬಂದು ಮನಸ್ಸಿಗೆ ಸಂತೋಷವನ್ನು ನೀಡಿದರೆ ಮರುಕ್ಷಣದಲ್ಲೇ ಅದರ ಹಿಂದೆ ನೋವನ್ನು ನೀಡಿ ಕಣ್ಣಂಚಿನ ಕಣ್ಣೀರ ಹನಿಯಾ ಜೊತೆ ಅವು ಕಣ್ಮರೆಯಾಗುತ್ತವೆ..! ಈ ನೆನಪುಗಳೆ ಹಾಗೆ ತುಂಬಾ ನಿಗೂಢ..!! ನಮ್ಮ ನೆನಪಿನ ನೋವುಗಳು ನಾವೇ ಪ್ರೀತಿಸುವ ಮಳೆಯಲ್ಲಿ ಬರುವ ಕಣ್ಣೀರಿನಂತೆ.. ಆ ಕಣ್ಣೀರು ನಮಗೆ ಬಿಟ್ಟರೆ ಇನ್ಯಾರಿಗೂ ತಿಳಿಯೋದೆ ಇಲ್ಲಾ..!

ಬಾಳಿನ ಏರುದಾರಿಯಲ್ಲಿ ಸಾಗುತ್ತಿರುವ ನಮಗೆ ಮುಂದೊಂದು ದಿನ ಹಿಂತಿರುಗಿ ನಮ್ಮ ನೆನಪಿನ ಪುಟಗಳನ್ನು ನೋಡಿದಾಗ ಇದೇ ನೆನಪಿನ ನೋವುಗಳು ತುಟಿ ಅಂಚಿನಲ್ಲೊಂದು ಸಣ್ಣ ಮುಗುಳ್ನಗೆಯನ್ನು ಮೂಡಿಸಬಹುದು.., ಆದರೆ ಅನುಭವಿಸಿದ ನೋವಿಗೆ ತೆತ್ತ ಕಂದಾಯಕ್ಕೆ ಲೆಕ್ಕ ಬರೆದುಕೊಡುವವರುಂಟೆ..?
ಅದೆನೆಲ್ಲಾ ಇದ್ದರೂ ಕೂಡ ಬದುಕಿನ ಕೊನೆ ಹಂತದವರೆಗೂ ನೆನಪಿಗೆ ನೆನಪು ಮಾತ್ರ ಸೇರ್ಪಡೆಯಾಗುತ್ತಲೇ ಇರುತ್ತೆ..! ಒಂದು ಕಾಡೋಕೆ... ಇಲ್ಲಾ ಕಾಡಿಸೋಕೆ...!!

ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ.., ಜೊತೆಗೆ ಸಿಗೋ ಒಂದಷ್ಟು ಕಹಿ ನೆನಪುಗಳಿಂದ ಕಣ್ಣಂಚಲ್ಲಿ ತುಂಬಿಕೊಂಡ ನೀರಿನ ಜೊತೆ ಸಾಗಿದೆ ಈ ಜೀವನಾ..!!